ವರದಿಗಾರ ವಿಶೇಷ

ತ್ರಿವಳಿ ತಲಾಖ್ ಮತ್ತು ವಂದೇ ಮಾತರಂ ವಿವಾದಗಳ ನಡುವೆ ಸದ್ದಾಗದ ತೈಲ ದರಯೇರಿಕೆ

ವರದಿಗಾರ: 2014ರ ಚುನಾವಣಾ ಪ್ರಚಾರದಲ್ಲಿ ಯುಪಿಎ ಸರಕಾರದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಬಿಜೆಪಿಗೆ ಪ್ರಬಲ ಅಸ್ತ್ರವಾಗಿತ್ತು. ಬಹುಮತ ನೀಡಿದರೆ ಪೆಟ್ರೋಲ್, ಡೀಸೆಲ್ ಒಳಗೊಂಡಂತೆ ಎಲ್ಲಾ ಅಗತ್ಯ ವಸ್ತುಗಳು ನ್ಯಾಯ ಬೆಲೆಯಲ್ಲಿ ದೊರೆಯುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರು.

ಆದರೆ ಇದೀಗ ಅಗತ್ಯ ವಸ್ತುಗಳ ಬೆಲೆಯ ವಿಚಾರದಲ್ಲಿ ಯುಪಿಎ ಹಾಗೂ ಮೋದಿ ಸರಕಾರದ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದು ಆಕ್ರೋಶಿತ ಜನರ ಮಾತು.

ಜುಲೈ ತಿಂಗಳ ಆರಂಭದಿಂದ ಇದುವರೆಗೆ ಪೆಟ್ರೋಲ್ ಬೆಲೆಯಲ್ಲಿ ರೂ.6 ಹಾಗೂ ಡೀಸೆಲ್ ಬೆಲೆಯಲ್ಲಿ ರೂ. 3.67 ರಷ್ಟು ಹೆಚ್ಚಳವಾಗಿದೆ. ಜೂನ್ 16ರಿಂದ ಇಂಧನ ಕಂಪೆನಿಗಳು 15ವರ್ಷ ಹಳೆಯ, ತಿಂಗಳಲ್ಲಿ ಎರಡು ಬಾರಿ ಬೆಲೆಯನ್ನು ಪರಿಷ್ಕರಿಸುವ ಪದ್ಧತಿಗೆ ವಿದಾಯ ಹೇಳಿ ದೈನಂದಿನ ಪರಿಷ್ಕಾರವನ್ನು ಪ್ರಾರಂಭಿಸಿದ್ದರು. ಇದು ಇಂಧನ ಬೆಲೆಯಲ್ಲಿ ಕಡಿತಕ್ಕೆ ಕಾರಣವಾಗಬಹುದೆಂದು ಆಡಳಿತ ಪಕ್ಷದ ಬೆಂಬಲಿಗರು ಜನರನ್ನು ನಂಬಿಸಿದ್ದರು.

ಜೂನ್ 16ರಿಂದ ಪ್ರತಿದಿನ ಬೆಳಿಗ್ಗೆ 6 ಘಂಟೆಗೆ ಇಂಧನ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. ಆರಂಭದ 15 ದಿನಗಳಲ್ಲಿ ದರ ಕಡಿತ ಕಂಡರೂ, ನಂತರದ ದಿನಗಳು ಹಾಗಲ್ಲ.
ಜೂನ್ 16 ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ.65.48 ಪ್ರತಿ ಲೀಟರ್ ಗೆ ಹಾಗೂ ಡೀಸೆಲ್ ಬೆಲೆ ರೂ.54.49 ಇದ್ದರೆ, ದೈನಂದಿನ ಪರಿಷ್ಕರಣೆಗೊಳಗೊಂಡು ಜುಲೈ 2ರಂದು ಪೆಟ್ರೋಲ್ ಬೆಲೆಯು ರೂ.63.06 ಪ್ರತಿ ಲೀಟರ್ ಹಾಗೂ ಡೀಸೆಲ್ ರೂ.53.36 ಪ್ರತಿ ಲೀಟರ್’ಗೆ ಇಳಿದಿತ್ತು.
ಜುಲೈ 3 ರಿಂದ ಪ್ರತೀದಿನ ಇಂಧನ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ (ಕೆಲವು ದಿನಗಳನ್ನು ಹೊರತುಪಡಿಸಿ. ನಿಖರವಾಗಿರಬೇಕಾದರೆ, ಪೆಟ್ರೋಲ್ ಬೆಲೆಯು 4 ದಿನಗಳಲ್ಲಿ ಮಾತ್ರ ಕಡಿತಗೊಂಡಿದೆ).

ಈ ಮೊದಲು ತಿಂಗಳಲ್ಲಿ ಎರಡು ಬಾರಿ ಪರಿಷ್ಕರಣೆಗೊಳ್ಳುತ್ತಿದ್ದಾಗ ಇಂಧನ ಬೆಲೆಯಲ್ಲಿ 1-2 ರೂಪಾಯಿಗಳ ಹೆಚ್ಚಳವಾದಾಗ ಎಲ್ಲರಿಗೂ ಬಿಸಿ ಮುಟ್ಟುತ್ತಿತ್ತು ಹಾಗೂ ಜನರು ಹಾಹಾಕಾರವೆಬ್ಬಿಸುತ್ತಿದ್ದರು. ಆದರೆ ಇದೀಗ ದೈನಂದಿನ ಪರಿಷ್ಕರಣೆಯಲ್ಲಿ 1 ರಿಂದ 15 ಪೈಸೆಯಷ್ಟು ಹೆಚ್ಚಳವಾಗುತ್ತಿರುವುದರಿಂದ ಯಾರ ಗಮನಕ್ಕೂ ಬರುವುದಿಲ್ಲ.

ಯುಪಿಎ ಸರಕಾರದ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿದಾಗ ಅದರ ವಿರುದ್ಧ ಗಂಟೆಗಟ್ಟಲೆ ಭಾಷಣ ಮಾಡಿದ ನರೇಂದ್ರ ಮೋದಿಯವರ ನೇತೃತ್ವದ, ಬೆಲೆ ಏರಿಕೆ ವಿರುದ್ಧ ರಸ್ತೆಗಿಳಿದು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ ಸುಷ್ಮಾ ಸ್ವರಾಜ್, ಗಡ್ಕರಿ,ರಾಜನಾಥ್ ಸಿಂಗ್ ರನ್ನೊಳಗೊಂಡ ಸರಕಾರವೇ ಅಧಿಕಾರದಲ್ಲಿರುವಾಗ ಇಂಧನವನ್ನೊಳಗೊಂಡಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ವಿಪರ್ಯಾಸ. ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆಯ ಬಗ್ಗೆ ಅಹೋರಾತ್ರಿ ವರದಿ,ಟ್ವೀಟ್’ಗಳ ಮೂಲಕ ಗುಲ್ಲೆಬ್ಬಿಸುತ್ತಿದ್ದ ಮಾದ್ಯಮ ರಂಗದ ದಿಗ್ಗಜರು ಪ್ರಸ್ತುತ ಸರಕಾರದ ಬೆಲೆ ಏರಿಕೆ ಬಗ್ಗೆ ತುಟಿಪಿಟಿಕ್ಕೆನ್ನದಿರುವುದು ಈ ದೇಶದ ದುರಂತವೇ ಸರಿ.

Click to comment

Leave a Reply

Your email address will not be published. Required fields are marked *

To Top
error: Content is protected !!