ರಾಷ್ಟ್ರೀಯ ಸುದ್ದಿ

ಮೋದಿ ರ‍್ಯಾಲಿ ಮೊದಲು ಹಣ ಹಂಚಲಾಗಿತ್ತು: ಕಾಂಗ್ರೆಸ್ ಗಂಭೀರ ಆರೋಪ

ಇದು ವೋಟಿಗಾಗಿ ನೋಟು ನೀಡುವ ಹಗರಣವನ್ನು ಬಹಿರಂಗಪಡಿಸಿದೆ: ಕಾಂಗ್ರೆಸ್ ವಕ್ತಾರ ಸುರ್ಜೇವಾಲಾ

‘ಸಭೆಗೆ ಜನರನ್ನು ಸೆಳೆಯಲು ಲಂಚ ನೀಡಿರುವುದು ಚೌಕೀದಾರ್ ಕಳ್ಳ ಎಂದು ಸಾಬೀತಾಗಿದೆಯಲ್ಲವೇ?’; ಕಾಂಗ್ರೆಸ್ ಪ್ರಶ್ನೆ

ವರದಿಗಾರ (ಎ.04):  ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತದಾರರಿಗೆ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅರುಣಾಚಲ ಪ್ರದೇಶದ ಪಸೀಘಾಟ್‌ನಲ್ಲಿ ನರೇಂದ್ರ ಮೋದಿ ಚುನಾವಣಾ ರ‍್ಯಾಲಿ ನಡೆಸುತ್ತಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಮೋದಿ ರ‍್ಯಾಲಿ ಮುನ್ನ ಅರುಣಾಚಲ ಪ್ರದೇಶದಲ್ಲಿ ಮತದಾರರಿಗೆ ಹಣ ಹಂಚಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ 2 ವೀಡಿಯೋಗಳನ್ನು ಬಹಿರಂಗಪಡಿಸಿರುವ ಸುರ್ಜೇವಾಲಾ, ‘ಮಂಗಳವಾರ ರಾತ್ರಿ 10.30ಕ್ಕೆ ಅರುಣಾಚಲ ಮುಖ್ಯಮಂತ್ರಿ ಪೇಮ ಖಂಡು ಅವರ ಬೆಂಗಾವಲು ವಾಹನದ ಮೇಲೆ ಪೊಲೀಸರು ದಾಳಿ ನಡೆಸಿದಾಗ  ₹1.8 ಕೋಟಿ ಪತ್ತೆಯಾಗಿದೆ’ ಎಂದು ಹೇಳಿದ್ದಾರೆ.

ಖಂಡು ಅವರ ಬೆಂಗಾವಲು ಕಾರಿನಿಂದ ಹಣ ವಶ ಪಡಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಎರಡು ಕಾರುಗಳ ವಾಹನ ಸಂಖ್ಯಾ ನೋಂದಣಿ ಫಲಕವೂ ವೀಡಿಯೋ ದೃಶ್ಯದಲ್ಲಿದೆ.

ವೀಡಿಯೋವನ್ನು ಬಹಿರಂಗಪಡಿಸಿದ ಸುರ್ಜೇವಾಲ, ಈ ವೀಡಿಯೋ ವೋಟಿಗಾಗಿ ನೋಟು ನೀಡುವ ಹಗರಣವನ್ನು ಬಹಿರಂಗ ಪಡಿಸಿದೆ. ಅರುಣಚಾಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ಅವರ ಬೆಂಗಾವಲು ಪಡೆಯ ಮೇಲೆ ಪೊಲೀಸರು ದಾಳಿ ನಡೆಸಿ ₹1.8 ಕೋಟಿ ಮೌಲ್ಯವಿರುವ ₹500 ಮುಖಬೆಲೆಯ ನೋಟಿನ ಕಂತೆಯನ್ನು ವಶಪಡಿಸಿದ್ದಾರೆ ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇದು ಪ್ರಜಾಪ್ರಭುತ್ವದಲ್ಲಿ ಕಪ್ಪು ದಿನ ಎಂದು ಹೇಳಿದ ಸುರ್ಜೇವಾಲಾ, ಅರುಣಾಚಲ ಪ್ರದೇಶದ ಪಸೀಘಾಟ್‍ನಲ್ಲಿರುನ ಸಿಯಾಂಗ್ ಅತಿಥಿ ಗೃಹದಲ್ಲಿ ನಿಲ್ಲಿಸಿದ್ದ ವಾಹನದಿಂದ ಈ ಹಣ ವಶಪಡಿಸಿಕೊಳ್ಳಲಾಗಿದೆ. ಯೂತ್ ಕಾಂಗ್ರೆಸ್ ಸದಸ್ಯರು ನೀಡಿದ ದೂರಿನನ್ವಯ  ಐದು ವಾಹನಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ದಾಳಿಯಲ್ಲಿ ವಶ ಪಡಿಸಿದ ಹಣನನ್ನು ಚುನಾವಣಾ ಆಯೋಗದ ವೆಚ್ಚ ಅಧಿಕಾರಿ ಸ್ಮಿೃತಾ ಕೌರ್ ಗಿಲ್ ಮತ್ತು ಜಿಲ್ಲಾಧಿಕಾರಿ ಕಿನ್ನಿ ಸಿಂಗ್ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಎಣಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕಪ್ಪು ಹಣವನ್ನು ವಾಪಸ್ ತರುತ್ತೇನೆ ಎಂದು ಮೋದಿ ಹೇಳಿದ್ದರು. ಈಗ ವಶ ಪಡಿಸಿಕೊಂಡಿರುವ ₹1.8 ಕೋಟಿ ಹಣ ಅದರ ಭಾಗವೇ? ಇದು ಪ್ರಧಾನಿಯವರ ರ‍್ಯಾಲಿಗಾಗಿ ಮತದಾರರರಿಗೆ ಲಂಚ ನೀಡಿದ್ದು  ಆದರೆ ಚೌಕೀದಾರ್ ಕಳ್ಳ ಎಂದು ಸಾಬೀತಾಗುತ್ತದೆ ಅಲ್ಲವೇ? ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ಪೀಪಲ್ಸ್ ರೆಪ್ರಸೆಂಟೇಷನ್ ಕಾಯ್ದೆ 1951ರ ಪ್ರಕಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥಿ ತಾಪಿರ್ ಗಾವ್ ವಿರುದ್ಧ ಪ್ರಕರಣ ದಾಖಲಿಸಬೇಕಿದೆ.

ಅದೇ ವೇಳೆ ಪೇಮ ಖಂಡು ಅವರನ್ನು  ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು. ಪಶ್ಚಿಮ ಅರುಣಾಚಲ ಪ್ರದೇಶದಿಂದ ಚುನಾವಣೆ ಸ್ಪರ್ಧಿಸುತ್ತಿರುವ ತಾಪಿರ್ ಗಾವ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಸುರ್ಜೇವಾಲಾ ಒತ್ತಾಯಿಸಿದ್ದಾರೆ.

ಹಣ ಹಂಚಲಾಗಿದೆ ಎಂದು ಆರೋಪಿಸಿರುವ ಪತ್ರಿಕಾಗೋಷ್ಠಿಯ ವೀಡಿಯೋ:

To Top
error: Content is protected !!
WhatsApp chat Join our WhatsApp group