ರಾಷ್ಟ್ರೀಯ ಸುದ್ದಿ

ಪೌರತ್ವ ಮಸೂದೆ ರದ್ದು ಪಡಿಸುವ ಮೂಲಕ ಅಸ್ಸಾಂ ಜನತೆಯ ಮೇಲೆ ಬಿಜಿಪಿ, ಆರೆಸ್ಸೆಸ್ ದಾಳಿ ನಡೆಸುತ್ತಿದೆ: ರಾಹುಲ್ ಗಾಂಧಿ

ಅಸ್ಸಾಂನ ಗೋಲಾಘಾಟ್‌ನ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಬಿಜೆಪಿ ವಿರುದ್ಧ ವಾಗ್ದಾಳಿ

ವರದಿಗಾರ (ಎ.04):  ಪೌರತ್ವ ಮಸೂದೆಯನ್ನು ರದ್ದು ಪಡಿಸುವ ಮೂಲಕ ಅಸ್ಸಾಂನ ಜನತೆಯ ಮೇಲೆ ಬಿಜೆಪಿ ಹಾಗೂ ಆರೆಸ್ಸೆಸ್ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅವರು ಅಸ್ಸಾಂನ ಗೋಲಾಘಾಟ್‌ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ  ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಅಸ್ಸಾಂನ ಜನತೆಯ ಮೇಲೆ ಆರೆಸ್ಸೆಸ್ ದಾಳಿ ನಡೆಸುತ್ತಿದೆ. ನಿಮ್ಮ ಭಾಷೆ, ಸಂಸ್ಕೃತಿ ಮತ್ತು ನಿಮ್ಮ ಇತಿಹಾಸ ಆರೆಸ್ಸೆಸ್ ನಿಂದ ದಾಳಿಗೆ ಒಳಗಾಗುತ್ತಿದೆ. ಪೌರತ್ವ (ತಿದ್ದುಪಡಿ) ಮಸೂದೆಗೆ ಅನುಮೋದನೆ ಪಡೆಯಲು ನಾವು ಬಿಡುವುದಿಲ್ಲ’ ಎಂದು ರಾಹುಲ್ ಗಾಂಧಿ ಇದೇ ಸಂದರ್ಭ ಹೇಳಿಕೊಂಡಿದ್ದಾರೆ.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲು ಶಿಫಾರಸು ಮಾಡಿತ್ತು. ಯುಪಿಎ ಕೈಗೊಂಡಿದ್ದ ಎಲ್ಲ ಕ್ರಮಗಳನ್ನೂ ಮೋದಿ, ಬಿಜೆಪಿ ನೇತೃತ್ವದ ಸರ್ಕಾರ ತೆರವುಗೊಳಿಸಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

‘ನಮ್ಮ ನೀತಿಯಿಂದಾಗಿ ಈಶಾನ್ಯ ರಾಜ್ಯಗಳು ಉತ್ಪಾದನಾ ಹಬ್ ಆಗಬಹುದು ಹಾಗೂ ಈ ರಾಜ್ಯಗಳಲ್ಲಿ ಉನ್ನತ ತಂತ್ರಜ್ಞಾನ ಕಂಪನಿಗಳು ಆರಂಭವಾಗಬಹುದು ಎಂದು ನಾವು ಭಾವಿಸಿದ್ದೆವು. ಆದರೆ, ನರೇಂದ್ರ ಮೋದಿಯವರು ಆ ನೀತಿಯನ್ನೇ ಬದಿಗೆ ಸರಿಸಿದ್ದಲ್ಲದೆ ಯೋಜನಾ ಆಯೋಗವನ್ನೇ ವಿಸರ್ಜಿಸಿದರು’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಶಾನ್ಯ ರಾಜ್ಯಗಳಿಗಾಗಿ ಕೈಗಾರಿಕಾ ನೀತಿ ರೂಪಿಸಲಿದೆ. ಹೊಸ ಯೋಜನಾ ಆಯೋಗವನ್ನೂ ರಚಿಸಲಿದೆ ಎಂದೂ ಅವರು ಭರವಸೆ ನೀಡಿದ್ದಾರೆ.

 

To Top
error: Content is protected !!
WhatsApp chat Join our WhatsApp group