ರಾಷ್ಟ್ರೀಯ ಸುದ್ದಿ

ದಕ್ಷಿಣ ಭಾರತ ಹಾಗೂ ಪಂಜಾಬ್ ನಲ್ಲಿ ಮೋದಿ ಜನಪ್ರಿಯರಲ್ಲ! : ಸಿ ವೋಟರ್ ಸಮೀಕ್ಷೆ

ವರದಿಗಾರ (23-03-2019): ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮಿಳುನಾಡಿಗೆ ಆಗಮಿಸಿದಾಗ ಕೆಲವು ಸಂಘಟನೆಗಳು ಕಪ್ಪು ಧ್ವಜವನ್ನು ಪ್ರದರ್ಶಿಸಿ ಪ್ರತಿಭಟಿಸಿದ್ದರು. ಅದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ #GoBackModi ಕೆಲವು ದಿನಗಳವರೆಗೆ ಟ್ರೆಂಡಿಂಗ್ ಟಾಪಿಕ್ ಆಗಿತ್ತು. ಇದು ಒಂದು ಐಟಿ ಸೆಲ್ ಗಿಮಿಕ್ ಎಂದು ಭಾವಿಸಿದ್ದಲ್ಲಿ ನೀವು ತಪ್ಪು ಮಾಡುತ್ತಿದ್ದೀರಿ. ಸಮೀಕ್ಷೆಯೊಂದರ ಪ್ರಕಾರ ಮೋದಿ ದಕ್ಷಿಣ ಭಾರತದಲ್ಲಿ ಜನಪ್ರಿಯರಲ್ಲ ಎನ್ನುವುದು ಸ್ಪಷ್ಟವಾಗಿದೆ.

ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿ 60,000 ಮತದಾರರನ್ನು ಸಂದರ್ಶಿಸಿ ‘ಸಿ ವೋಟರ್’ ಸಂಸ್ಥೆಯು ನಡೆಸಿದ ಸಮೀಕ್ಷೆಯ ಪ್ರಕಾರ ದಕ್ಷಿಣ ಭಾರತೀಯರು ಮೋದಿ ಆಡಳಿತದ ಬಗ್ಗೆ ತೀವ್ರ ಅಸಂತುಷ್ಟರಾಗಿದ್ದಾರೆ.

ತಮಿಳುನಾಡಿನಲ್ಲಿ ಕೇವಲ 2.2% ಜನರು ಮೋದಿ ಆಡಳಿತದಿಂದ ತೃಪ್ತರಾಗಿದ್ದಾರೆ. ಪಕ್ಕದ ಕೇರಳದಲ್ಲಿ 7.7% ಜನರು ತೃಪ್ತರಾಗಿದ್ದರೆ, ಪುದುಚ್ಚೇರಿಯಲ್ಲಿ 10.7% ಜನರು ತೃಪ್ತರಾಗಿದ್ದಾರೆ.

ಆಂದ್ರಪ್ರದೇಶದಲ್ಲಿ 23.6% ಜನರು ತೃಪ್ತರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಮೋದಿ ಸ್ವಲ್ಪ ಜನಪ್ರಿಯರಾಗಿದ್ದಾರೆ. ತೆಲಂಗಾಣದಲ್ಲಿ 37.7 % ತೃಪ್ತರಾಗಿದ್ದರೆ, ಕರ್ನಾಟಕದಲ್ಲಿ 38.4% ಜನರು ತೃಪ್ತರಾಗಿದ್ದಾರೆ.

ಜಾರ್ಖಂಡ್, ರಾಜಸ್ತಾನ, ಗೋವಾ ಹಾಗೂ ಹರಿಯಾಣದಲ್ಲಿ ಮೋದಿ ಅತೀ ಹೆಚ್ಚು ಜನಪ್ರಿಯರಾಗಿದ್ದಾರೆ. ಇಲ್ಲಿ ಕ್ರಮವಾಗಿ 78%, 68.3%, 66% ಹಾಗೂ 65.9% ಜನರು ಮೋದಿ ಅಡಳಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಉತ್ತರ ಭಾರತದ ರಾಜ್ಯಗಳಲ್ಲಿ ಪಂಜಾಬ್ ನಲ್ಲಿ ಮೋದಿ ಆಡಳಿತದ ಕುರಿತು ತೀವ್ರ ಅಸಂತುಷ್ಟತೆ ವ್ಯಕ್ತವಾಗಿದೆ. ಪಂಜಾಬಿನಲ್ಲಿ ಕೇವಲ 12% ಜನರು ಮೋದಿ ಆಡಳಿತ ಶೈಲಿಯಿಂದ ತೃಪ್ತರಾಗಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಕೇವಲ 43.9% ಜನರು ತೃಪ್ತರಾಗಿದ್ದಾರೆ. ಈ ರಾಜ್ಯದ ವಾರಣಾಸಿ ಕ್ಷೇತ್ರದಿಂದ ಮೋದಿ ಲೋಕಸಭೆಗೆ ಆಯ್ಕೆಯಾಗಿದ್ದಾರೆನ್ನುವುದು ಇಲ್ಲಿ ಗಮನಾರ್ಹವಾಗಿದೆ.

To Top
error: Content is protected !!
WhatsApp chat Join our WhatsApp group