ರಾಜ್ಯ ಸುದ್ದಿ

5 ವರ್ಷಗಳಲ್ಲಿ ಪ್ರಧಾನಿ ಮೋದಿ ಬಾಯಿ ಬಡಾಯಿ ಮಾಡುವುದು ಬಿಟ್ಟರೆ ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

ವರದಿಗಾರ (ಮಾ.19): ನಮ್ಮ ಕಾರ್ಯಕರ್ತರು ಈ ಬಾರಿ ದೃಢವಾದ ಸಂಕಲ್ಪ ಮಾಡಿ, ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತವನ್ನು ಕೊನೆಗಾಣಿಸಬೇಕು. ಮೋದಿ ಮಾತನಾಡುವುದು, ಭಾಷಣ ಮಾಡುವುದು, ಮನ್ ಕೀ ಬಾತ್ ಹೇಳುವುದು ಬಿಟ್ಟರೆ, ಐದು ವರ್ಷಗಳಲ್ಲಿ ಬಾಯಿ ಬಡಾಯಿ ಮಾಡಿರುವುದನ್ನು ಬಿಟ್ಟರೆ ಸಾಧನೆ ಶೂನ್ಯ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಸೋಮವಾರ ಕಲಬುರ್ಗಿಯ ಎನ್.ವಿ.ಮೈದಾನದಲ್ಲಿ ಕೆಪಿಸಿಸಿ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಶೀರ್ವಾದ ಮಾಡಿ. ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ, ಅಭಿವೃದ್ಧಿ ಚಿಂತಕ. ಅವರನ್ನು ಲೋಕಸಭೆಗೆ ಕಳುಹಿಸಿಕೊಡಿ. 9 ಬಾರಿ ವಿಧಾನಸಭೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ, ನರೇಂದ್ರ ಮೋದಿಗೆ ಸಿಂಹ ಸ್ವಪ್ನವಾಗಿದ್ದಾರೆ. ಅದಕ್ಕಾಗಿ ಮೋದಿಗೆ ಖರ್ಗೆ ಮೇಲೆ ಕೆಂಗಣ್ಣು ಎಂದು ಆರೋಪಿಸಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇತ್ತೀಚೆಗೆ ಕಲಬುರಗಿಗೆ ಬಂದಿದ್ದ ನರೇಂದ್ರಮೋದಿ ತಮ್ಮ 40 ನಿಮಿಷಗಳ ಭಾಷಣದಲ್ಲಿ ಕಲಬುರಗಿ ಜನತೆಗೆ ಏನು ಕೊಟ್ಟಿದ್ದೇನೆ, ಏನು ಕೊಡುತ್ತೇನೆ ಎಂದು ಒಂದು ಶಬ್ಧವನ್ನು ಹೇಳಲಿಲ್ಲ. ಈ ಭಾಗದ ಜನರ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂದರು. ಬಿಜೆಪಿ ಹಾಗೂ ಮೋದಿಗೆ ಇಲ್ಲಿನ ಜನತೆಯ ಮತ ಕೇಳುವ ನೈತಿಕತೆಯಿಲ್ಲ. ಐದು ವರ್ಷಗಳಲ್ಲಿ ಏನು ಕೆಲಸ ಮಾಡಿದ್ದೀರಾ? ಅದರ ಲೆಕ್ಕ ಕೊಟ್ಟು ಮುಂದೆ ಹೋಗಿ, ಚುನಾವಣೆ ಪ್ರಣಾಳಿಕೆಯಲ್ಲಿ ಏನು ಹೇಳಿದ್ದೀರಾ, ಅದನ್ನು ಎಷ್ಟು ಅನುಷ್ಟಾನ ಮಾಡಿದ್ದೀರಾ ಹೇಳಿ ಎಂದು ಮೋದಿಗೆ ಖರ್ಗೆ ಪ್ರಶ್ನಿಸಿದರು.

ನನ್ನ ವಿರುದ್ಧ ದಿಲ್ಲಿಯಿಂದ ಗಲ್ಲಿಯವರೆಗೆ ಸಂಚು ಮಾಡುತ್ತಿದ್ದಾರೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವವರೆಗೆ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಎಷ್ಟು ಜನ ಮೋದಿಗಳು ಬಂದು ಇಲ್ಲಿ ಭಾಷಣ ಮಾಡಿದರೂ, ಜನ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್‌ಗೆ ಕಾಂಗ್ರೆಸ್ ಸಮಾವೇಶದಲ್ಲಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

To Top
error: Content is protected !!
WhatsApp chat Join our WhatsApp group