ರಾಜ್ಯ ಸುದ್ದಿ

ಎಸ್.ಡಿ.ಪಿ.ಐ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಲ್ಯಾಸ್ ತುಂಬೆ

ವರದಿಗಾರ (ಮಾ.17): ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ಬೃಹತ್ ಜಿಲ್ಲಾ ಸಮಾವೇಶ ಇಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಿತು. ಈ ಸಭೆಯಲ್ಲಿ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಏಕಮಾತ್ರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಜಿಲ್ಲೆಯ ಯಶಸ್ವೀ ಸಾಮಾಜಿಕ ಹೋರಟಗಾರೂ, ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವಂತಹಾ ಇಲ್ಯಾಸ್ ಮುಹಮ್ಮದ್ ತುಂಬೆಯವರನ್ನು ಅಭ್ಯರ್ಥಿಯನ್ನಾಗಿ ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಘೋಷಿಸಿದ್ದಾರೆ.

ಈ ಮೂಲಕ ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಕ್ಷೇತ್ರದ ಮೊದಲ ಅಭ್ಯರ್ಥಿ ಘೋಷಿಸಿದಂತಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಅಂತಿಮ ಅಭ್ಯರ್ಥಿಯ ಆಯ್ಕೆಯಲ್ಲಿನ ಗೊಂದಲಗಳಿಂದಾಗಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ಬಿಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಎಸ್ಡಿಪಿಐಯ ಅಭ್ಯರ್ಥಿ ಘೋಷಣೆಯೊಂದಿಗೆ ಕ್ಷೇತ್ರ ಇದೀಗ ಮೂರು ಪಕ್ಷಗಳ ಜಿದ್ದಾ ಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಒಂದು ಲಕ್ಷಕ್ಕೂ ಮಿಕ್ಕ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. 1991ರಿಂದ ಕಳೆದ ಏಳು ಚುನಾವಣೆಗಳಲ್ಲಿ ಕಾಂಗ್ರೆಸ್ ಇಲ್ಲಿ ವಿಜಯಕ್ಕಾಗಿ ಹಂಬಲಿಸುತ್ತಲೇ ಇದ್ದು, ಪ್ರತಿ ಬಾರಿ ಮುಗ್ಗರಿಸಿದೆ. ಮಾತ್ರವಲ್ಲ ಬಿಜೆಪಿಯ ವಿಜಯದ ಅಂತರಗಳೂ ಚುನಾವಣೆಯಿಂದ ಚುನಾವಣೆಗೆ ಏರಿಕೆಯಾಗುತ್ತಲೇ ಸಾಗಿದೆ ಎಂಬುವುದು ಇಲ್ಲಿ ಗಮನಾರ್ಹ.

ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ:

ಎಸ್ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆಯವರು ಜಿಲ್ಲೆಯ ಜನರಿಗೆ ಹೋರಾಟ ರಂಗದಲ್ಲಿ ಚಿರಪರಿಚಿತ ಮುಖವಾಗಿದ್ದು, ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಇಲ್ಯಾಸ್ ರವರು, ಚೀಫ್ ಅಕೌಂಟಂಟ್ ಆಗಿ ತನ್ನ ವೃತ್ತಿ ಜೀವನ ಆರಂಭಿಸಿ ತದ ನಂತರ ಕೋಲಾರದ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ವಿದ್ಯಾರ್ಥಿ ಜೀವನದಲ್ಲೇ ಸಮಾಜಮುಖಿ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಇವರು, ಸ್ಥಳೀಯ ಪಂಚಾಯತಿನ ಅವ್ಯವಸ್ಥೆಗಳ ವಿರುದ್ಧ ಏಕಾಂಗಿ ಹೋರಾಟ ನಡೆಸಿದ್ದ ಕೀರ್ತಿ ಇವರದ್ದು. ತನ್ನ ಯುವತ್ವದ ಸಮಯದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಮಾಯಕರ ಬಂಧನ, ಪೊಲೀಸ್ ಕಿರುಕುಳ, ಫ್ಯಾಸಿಸ್ಟರ ಹಾವಳಿ ವಿರುದ್ಧ ಹೋರಾಟಕ್ಕಿಳಿದು, ಎಂ ವೈ ಎಫ್ ಎಂಬ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಆ ಮೂಲಕ ಕಾನೂನು ಹೋರಾಟ ನಡೆಸುತ್ತಿದ್ದರು.

ದಲಿತ ಚಳವಳಿಯಲ್ಲಿ ಹಲವಾರು ದಲಿತ ಸಂಘಟನೆಗಳ ಹೋರಾಟದಲ್ಲಿ ಸಹಭಾಗಿಯಾಗಿ ದಲಿತ ದಮನಿತರ ಪರವಾಗಿ ಸದಾ ಮಿಡಿಯುವ ಇಲ್ಯಾಸ್ ಮುಹಮ್ಮದ್ ತುಂಬೆಯವರು, ಉತ್ತರ ಭಾರತದ ರಾಜ್ಯಗಳಾದ ಬಿಹಾರ, ರಾಜಸ್ಥಾನ, ಉತ್ತರಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಣಿಪುರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ ಅವಿರತವಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ಗುಂಪು ಹತ್ಯಾ ಸಂತ್ರಸ್ತರೊಂದಿಗೆ ನಿಕಟ ಸಂಪರ್ಕವಿರಿಸಿ, ಅವರಿಗೆ ಕಾನೂನು ಹೋರಾಟಗಳ ಕುರಿತಂತೆ ಅರಿವು ಮೂಡಿಸಿ, ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.

ಬುದ್ಧಿವಂತರ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರ ನಾಡಿಮಿಡಿತ ಮತ್ತು ಒಲವು ಯಾವ ಪಕ್ಷದ ಕಡೆಗೆಂದು ಮೇ 23ರ ವರೆಗೆ ಕಾದು ನೋಡಬೇಕಾಗಿದೆ. ಅದುವರೆಗೂ ಜಿಲ್ಲೆಯಲ್ಲಿ ರಾಜಕೀಯ ಚದುರಂಗದಾಟದ ಮೇಲಾಟಗಳನ್ನು ಕಾಣಬಹುದಾಗಿದೆ.

To Top
error: Content is protected !!
WhatsApp chat Join our WhatsApp group