ರಾಜ್ಯ ಸುದ್ದಿ

ಕಳ್ಳರಿಂದ ವಕ್ಫ್ ಆಸ್ತಿಗಳನ್ನು ಉಳಿಸಿಕೊಳ್ಳಬೇಕಾಗಿದೆ: ಇಲ್ಯಾಸ್ ಮುಹಮ್ಮದ್

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಕಬಳಿಕೆ ನಡೆದಿದೆ. ಅದನ್ನು ತೆರವುಗೊಳಿಸಿ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಲಿ: ಅನ್ವರ್ ಮಾಣಿಪ್ಪಾಡಿಗೆ ಸವಾಲು

ಎಸ್.ಡಿ.ಪಿ.ಐ ಯಿಂದ ‘ವಕ್ಫ್ ಬಚಾವೋ ಆಂದೋಲನ’ಕ್ಕೆ ಚಾಲನೆ

ವರದಿಗಾರ (ಮಾ.06): ವಕ್ಫ್ ಆಸ್ತಿಗಳನ್ನು ವಿವಿಧ ರೀತಿಯಲ್ಲಿರುವ ಕಳ್ಳರು ಕಬಳಿಸುತ್ತಿದ್ದಾರೆ. ಆ ಕಳ್ಳರಿಂದ ವಕ್ಫ್ ಆಸ್ತಿಗಳನ್ನು ಉಳಿಸಿಕೊಂಡು, ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕಾಗಿದೆ. ವಕ್ಫ್ ಆಸ್ತಿಗಳನ್ನು ಸರಿಯಾಗಿ ಬಳಸಿದ್ದೇ ಆದಲ್ಲಿ ಮುಸ್ಲಿಂ ಸಮುದಾಯ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಯಾಗಲಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್  ಪಾರ್ಟಿ ಆಫ್ ಇಂಡಿಯಾ -ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಅವರು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿಯಯ ಬೆಂಗಳೂರಿನ ದಾರುಸ್ಸಲಾಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ವಕ್ಫ್ ಬಚಾವೋ ಆಂದೋಲನ”ದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಎಲ್ಲಾ ವಿಧದ ಅಡೆ ತಡೆಗಳನ್ನು ಮೀರಿ ವಕ್ಫ್ ಆಸ್ತಿಗಳನ್ನು ಅರ್ಹ ಸಮುದಾಯಕ್ಕೆ ನೀಡುವುದೇ ಎಸ್.ಡಿ.ಪಿ.ಐ ಸಂಕಲ್ಪವೆಂದು ಇಲ್ಯಾಸ್ ತುಂಬೆ ಹೇಳಿದ್ದಾರೆ.

ರಾಜ್ಯದಲ್ಲಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳ ಮರು ವಶಪಡಿಸಲು ಎಸ್.ಡಿ.ಪಿ.ಐ ನಿರಂತರ ಹೋರಾಟ ನಡೆಸಲಿದೆ. ಕೆಲವು ರಾಜಕೀಯ ನಾಯಕರ ಮೇಲೆ ವಕ್ಫ್ ಆಸ್ತಿ ಒತ್ತುವರಿ-ಮಾರಾಟದ ಆರೋಪವಿದೆ. ಮುಸ್ಲಿಮ್ ಸಮುದಾಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ದಾಖಲಾತಿ ಕ್ರಮಬದ್ಧಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರಸ್ತಾವಿಕವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಮಾತನಾಡಿ, ಸಮುದಾಯದ ಹಿರಿಯರು ವಕ್ಫ್ ಆಸ್ತಿಗಳನ್ನು ಸಂರಕ್ಷಿಸಿ ಬಂದಿದ್ದಾರೆ. ಮುಂದಿನ ಪೀಳಿಗೆಗೆ ಈ ಆಸ್ತಿಗಳನ್ನು ಉಳಿಸಿ ಸದ್ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲನಾ ಅತೀಕುರ್ರಹ್ಮಾನ್, ಒಮ್ಮೆ ಅಲ್ಲಾಹನ ಹೆಸರಲ್ಲಿ ವಕ್ಫ್ ಮಾಡಲಾದ ಆಸ್ತಿಗಳು ಶಾಶ್ವತವಾಗಿ ಸಮುದಾಯದ ಸೊತ್ತಾಗಿರುತ್ತದೆ. ಅದರ ಮಾರಾಟ, ದುರ್ಬಳಕೆಗೆ ಅವಕಾಶವಿಲ್ಲ ಎಂದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಫ್ ಮಾತನಾಡಿ, ಇಸ್ಲಾಮಿನಲ್ಲಿ ನ್ಯಾಯ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಸಮಾಜದಲ್ಲಿ ಶಾಂತಿ-ಸಮಾಧಾನ ಮತ್ತು ನ್ಯಾಯ ಪಾಲನೆಗೆ ಹೋರಾಡುವ ಎಸ್ಡಿಕಪಿಐ ನ ವಕ್ಫ್ ಹೋರಾಟಕ್ಕೆ ಪಾಪ್ಯುಲರ್ ಫ್ರಂಟ್ ಬೆಂಬಲ ಸೂಚಿಸುತ್ತದೆ ಎಂದು ಹೇಳಿದರು.

ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಮಾತನಾಡಿ, ಬಿಜೆಪಿಯ ಅನ್ವರ್ ಮಾನಿಪ್ಪಾಡಿ ವರದಿ ಬಗ್ಗೆ ಅನಾವಶ್ಯಕ ರಾಜಕೀಯ ಮಾಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ವಕ್ಫ್ ಆಸ್ತಿಗಳ ಕಬಳಿಕೆ ನಡೆದಿದೆ. ಬಿಜೆಪಿ ಮೊದಲು ಆ ರಾಜ್ಯದ ಒತ್ತುವರಿ ತೆರವುಗೊಳಿಸಿ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಲಿ ಎಂದು ಪರೋಕ್ಷವಾಗಿ ಬಿಜೆಪಿಯ ಅನ್ವರ್ ಮಾಣಿಪ್ಪಾಡಿಗೆ ಸವಾಲು ಹಾಕಿದರು.  

ಎಸ್.ಡಿ.ಪಿ.ಐ ರಾಷ್ಟೀಯ ಉಪಾಧ್ಯಕ್ಷೆ ಫ್ರೋ.ನಾಝ್ನೀನ್ ಬೇಗಂ ಮಾತನಾಡಿ, ವಕ್ಫ್ ಆಸ್ತಿಗಳ ಆದಾಯದಿಂದ ಸಮುದಾಯದ ಸಂಪೂರ್ಣ ಬಡತನ ಮತ್ತು ಅನಕ್ಷರತೆಯನ್ನು ಹೋಗಲಾಡಿಸಬಹುದು ಎಂದರು.

ಸಾಮಾಜಿಕ ಹೋರಾಟಗಾರರಾದ ಸರ್ದಾರ್ ಖುರೈಶಿ, ಇಲ್ಯಾಸ್ ಆರ್.ಟಿ.ಓ, ಇಮ್ರಾನ್ ರಫಾಯಿ, ಇನಾಯತುಲ್ಲಾ ಶಾಬಂದ್ರಿ ಮತ್ತಿತರರು ವಕ್ಫ್ ಹೋರಾಟದ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಡಾ.ಮೆಹಬೂಬ್ ಷರೀಫ್, ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಅಬ್ದುಲ್ ಮಜೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಫಯಾಝ್ ಬೆಂಗಳೂರು ಉಪಸ್ಥಿತರಿದ್ದರು. ಕೋಶಾಧಿಕಾರಿ ಜಾವೀದ್ ಆಝಾಂ ಸ್ವಾಗತಿಸಿ, ಎಸ್.ಡಿ.ಟಿ.ಯು ರಾಜ್ಯಾಧ್ಯಕ್ಷ ಅಬ್ದುಲ್ ರಹೀಮ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಸಮಿತಿ ಸದಸ್ಯ ಸಮಿ ಹಝ್ರತ್ ವಂದಿಸಿದರು. ಸಭೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಧಾರ್ಮಿಕ ನೇತಾರರು, ವಕ್ಫ್ ಪದಾಧಿಕಾರಿಗಳು ಮತ್ತು ಎಸ್.ಡಿ.ಪಿ.ಐ ಜಿಲ್ಲಾ ನಾಯಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಈ ಸಂದರ್ಭ ನೀಡಿದರು.

ಎಸ್.ಡಿ.ಪಿ.ಐ ತೆಗೆದಿರುವ ‘ವಕ್ಫ್ ಬಚಾವೋ ಆಂದೋಲನ’ದ ಬಗ್ಗೆ ಮಾತನಾಡಿದ ವಿವಿಧ ಹೋರಾಟಗಾರರು ‘ಇದು ಎಸ್.ಡಿ.ಪಿ.ಐ ಯ ಉತ್ತಮ ಆಂದೋಲನವೆಂದು ಸಂಘಟಕರನ್ನು ಅಭಿನಂದಿಸಿ, ಈ ಆಂದೋಲನದಲ್ಲಿ ತಮ್ಮ ಕೈಲಾಗುವ ಎಲ್ಲಾ ಸಹಾಯವನ್ನು ನೀಡಲಿದ್ದೇವೆ ಎಂದು ಈ ಸಂದರ್ಭ ಭರವಸೆ ನೀಡಿದ್ದಾರೆ.

To Top
error: Content is protected !!
WhatsApp chat Join our WhatsApp group