ರಾಷ್ಟ್ರೀಯ ಸುದ್ದಿ

ಬಿಜೆಪಿಗರೇ, ಸೈನಿಕರ ತ್ಯಾಗವನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳಬೇಡಿ: ಮಿಲಿಟರಿ ಅಧಿಕಾರಿಯ ಪತ್ನಿ ಆಕ್ರೋಶ !

ವರದಿಗಾರ ಫೆ 28 : ಭಾರತ-ಪಾಕ್ ಗಡಿಯಲ್ಲಿ ತಲೆದೋರಿರುವ ಉದ್ವಿಗ್ನತೆಯನ್ನು ತಮ್ಮ ರಾಜಕೀಯ ಗಳಿಕೆಗಾಗಿ ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳುತ್ತಿರುವ ಬಿಜೆಪಿಯ ಕುಕೃತ್ಯದ ವಿರುದ್ಧ ದೇಶದಾದ್ಯಂತ ಜನರು ಆಕ್ರೋಶಗೊಳ್ಳುತ್ತಿರುವುದರ ಜೊತೆಗೆ, ಸದ್ಯಕ್ಕೆ ಪಾಕಿಸ್ಥಾನದ ಮಿಲಿಟರಿ ಕೈಯ್ಯಲ್ಲಿ ಬಂಧಿತರಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ಹಾಗೂ ಅವರ ಕುಟುಂಬದ  ಪರವಾಗಿ ಮತ್ತೊಬ್ಬ ಮಿಲಿಟರಿ ಅಧಿಕಾರಿಯೊಬ್ಬರ ಪತ್ನಿ,  ಬಿಜೆಪಿಯ ನೈಜ ಮುಖವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

ಆ ಮಿಲಿಟರಿ ಅಧಿಕಾರಿ ಪತ್ನಿ ಮಾಡಿರುವ ಸೆಲ್ಫೀ ವೀಡಿಯೋ ಒಂದರಲ್ಲಿ “ಎಲ್ಲರಿಗೂ ನಮಸ್ಕಾರ. ನಾನು ಎಲ್ಲಾ ಸೈನಿಕರ ಕುಟುಂಬದ ಪರವಾಗಿ ದೇಶದ ಪ್ರತಿಯೊಬ್ಬರೊಂದಿಗೆ, ಅದರಲ್ಲೂ ರಾಜಕೀಯ ಪಕ್ಷಗಳ ನಾಯಕರಿಗೆ  ವಿನಂತಿಸುವುದೇನೆಂದರೆ, ಯಾರು ಕೂಡಾ ಸೈನಿಕರ ತ್ಯಾಗದ ವಿಷಯದಲ್ಲಿ ರಾಜಕೀಯ ಮಾಡಬಾರದು. ಒಬ್ಬ ಸೈನಿಕನಾಗಬೇಕಾದರೆ ಅವನು ಬಹಳಷ್ಟು ತ್ಯಾಗ ಮಾಡಿರಬೇಕಾಗುತ್ತದೆ. ಇದೀಗ ಅಭಿನಂದನ್ ಅವರ ಕುಟುಂಬ ಎದುರಿಸುತ್ತಿರುವ ನೋವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಭಾರತ – ಪಾಕ್ ಗಡಿಯಲ್ಲಿ ಗಡಿ ಉದ್ವಿಗ್ನತೆ ಕಡಿಮೆಯಾಗುವವರೆಗಾದರೂ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ರಾಲಿಗಳನ್ನು ನಿಲ್ಲಿಸಬೇಕು. ರಾಜಕೀಯದವರೇ, ಅದರಲ್ಲೂ ಬಿಜೆಪಿಗರೇ ಎಚ್ಚರಿಕೆ.. ಮತ್ತೊಮ್ಮೆ ನಾನು ಪುನರುಚ್ಚರಿಸುತ್ತಿದ್ದೇನೆ, ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ ನಮ್ಮ ಸೈನಿಕರ ತ್ಯಾಗ -ಬಲಿದಾನಗಳನ್ನು ನಿಮ್ಮ ರಾಜಕೀಯಕ್ಕಾಗಿ ಕಸಿದುಕೊಳ್ಳುವುದನ್ನು ಹಾಗೂ ಬಳಸುವುದನ್ನು ಕೂಡಲೇ ನಿಲ್ಲಿಸಬೇಕು” ಎಂದು ಆಕ್ರೋಶಭರಿತರಾಗಿ ಹೇಳಿದ್ದಾರೆ.

ಒಟ್ಟಾರೆಯಾಗಿ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದ ಮರುದಿನದಿಂದಲೇ ಚುನಾವಣಾ ರಾಲಿಗಳನ್ನು ಆಯೋಜಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಹೆಸರನ್ನು ಉಲ್ಲೇಖಿಸದೆ ಮಿಲಿಟರಿ ಅಧಿಕಾರಿಯವರ ಪತ್ನಿ ಬಿಜೆಪಿ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೋದಿ ಇತ್ತೀಚೆಗೆ ರಾಜಸ್ಥಾನದ ಚುರು ಎಂಬಲ್ಲಿ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರ ಭಾವಚಿತ್ರಗಳನ್ನು ಬಳಸಲಾಗಿತ್ತು. ಅಮಿತ್ ಶಾ ಕೂಡಾ ವಾಯುಸೇನಾ ದಾಳಿಯನ್ನು ಮುಂದಿಟ್ಟುಕೊಂಡು ಮೋದಿಗೆ ಮತನೀಡಿ ಎಂದು ಭಾಷಣ ಮಾಡಿದ್ದರು. ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು, ವಾಯುಸೇನೆಯ ದಾಳಿಯು ಬಿಜೆಪಿಗೆ ರಾಜ್ಯದಲ್ಲಿ 22 ಸೀಟುಗಳನ್ನು ಗಳಿಸಿಕೊಡಲು ಸಹಕಾರಿಯಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆಯು ಪಾಕಿಸ್ಥಾನದ ಮಾಧ್ಯಮಗಳಲ್ಲೂ ಸದ್ದು ಮಾಡಿತ್ತು. ಇದೀಗ ಭಾರತದ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರ ಪತ್ನಿ ಕೂಡಾ ಬಿಜೆಪಿ ವಿರುದ್ಧ ಹರಿಹಾಯ್ದಿರುವುದು ಬಿಜೆಪಿಯು ಸೈನಿಕರ ಸಾವನ್ನು ತನ್ನ ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳುತ್ತಿರುವುದರ ವಿರುದ್ಧ ಜನತೆಯ ಆಕ್ರೋಶವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

 

To Top
error: Content is protected !!
WhatsApp chat Join our WhatsApp group