ರಾಷ್ಟ್ರೀಯ ಸುದ್ದಿ

ಸೈನಿಕರ ಸಾವಿನ ಮನೆಯಲ್ಲಿ ಯಡಿಯೂರಪ್ಪ ರಾಜಕೀಯ ಲೆಕ್ಕಾಚಾರ : ಪಾಕ್ ಮಾಧ್ಯಮಗಳಲ್ಲೂ ಹರಾಜಾಯಿತು ಬಿಜೆಪಿಯ ಮಾನ !

ವರದಿಗಾರ ಫೆ 28 : ಫೆಬ್ರವರಿ 14 ರಂದು ಜೈಶ್ ಉಗ್ರರ ಅಟ್ಟಹಾಸಕ್ಕೆ ಪುಲ್ವಾಮಾದಲ್ಲಿ 45ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರ ಬಲಿದಾನಕ್ಕೆ ಎದುರೇಟು ನೀಡಿದ್ದ ಭಾರತೀಯ ವಾಯುಸೇನೆಯ ದಾಳಿಯನ್ನು ಬಿಜೆಪಿ ಇದೀಗ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ವಿಚಾರ ದೇಶದೆಲ್ಲೆಡೆ ತೀವ್ರ ಗುರಿಯಾಗುತ್ತಿರುವ ಮಧ್ಯೆಯೇ, ಮಾಜಿ ಮುಖ್ಯಮಂತ್ರಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನಿನ್ನೆ ಚಿತ್ರದುರ್ಗದಲ್ಲಿ, “ಬಾಲಾಕೋಟ್ ನಲ್ಲಿ ವಾಯುಸೇನೆಯು ನಡೆಸಿದ ದಾಳಿಯು  ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ “ಲಾಭದಾಯಕ”ವಾಗಿ ಮಾರ್ಪಾಟಾಗಲಿದೆ. ಕನಿಷ್ಟ 22 ಸ್ಥಾನಗಳನ್ನು ಗೆಲ್ಲಲು ಇದು ಸಹಕಾರಿಯಾಗಲಿದೆ” ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಹೇಳಿಕೆ ತೀವ್ರ ಟೀಕೆಗೊಳಪಡುತ್ತಿರುವ ಮಧ್ಯೆಯೇ ಪಾಕಿಸ್ತಾನದ ಟಿವಿ ಚಾನೆಲ್ ಗಳೂ ಕೂಡಾ ಇದನ್ನೇ ಭಾರತದ ವಿರುದ್ಧ ಅಸ್ತ್ರವನಾಗಿ ಬಳಸಿಕೊಂಡಿದ್ದು, ಮೋದಿ ನೇತೃತ್ವದ ಬಿಜೆಪಿ ಸರಕಾರ ವಾಯುಸೇನೆಯ ದಾಳಿಯನ್ನು ತಮ್ಮರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ವರದಿ ಮಾಡಿದೆ.

ARY ಚಾನೆಲ್ ಹಾಗೂ 92 NEWS HD  ಎನ್ನುವ ಪಾಕಿಸ್ತಾನದ ಎರಡು ಖಾಸಗಿ ಚಾನೆಲ್ ಗಳು ಯಡಿಯೂರಪ್ಪನವರ ರಾಜಕೀಯ ಪ್ರೇರಿತ ಹೇಳಿಕೆಯನ್ನು ಉಲ್ಲೇಖಿಸಿ ಇದು ಮೋದಿಯವರ ಪಕ್ಷದ ನಾಯಕನೊಬ್ಬನ ಹೇಳಿಕೆ ಎಂದು ನೇರವಾಗಿ ಮೋದಿಯನ್ನು ಟೀಕಿಸಿದೆ.

ವಾಸ್ತವದಲ್ಲಿ ಪುಲ್ವಾಮಾ ಉಗ್ರರ ದಾಳಿ ನಡೆದಾಗ ಕೇಂದ್ರ ಸರಕಾರದ ಭದ್ರತಾ ವೈಫಲ್ಯವನ್ನು ಒಪ್ಪಿಕೊಳ್ಳದೆ ಸುಮ್ಮನಿದ್ದ ಬಿಜೆಪಿ ನಾಯಕರು, ಇದೀಗ ವಾಯುಸೇನೆ ನಡೆಸಿದ ಬಾಲಕೋಟ್ ದಾಳಿಯನ್ನು ಬಿಜೆಪಿ ನಾಯಕರು ತಮ್ಮ ರಾಜಕೀಯ ಉದ್ದೇಶಗಳಿಗೆ ಹಾಗೂ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಳಸಿಕೊಳ್ಳುತ್ತಿರುವುದು ಮಾತ್ರ ನಾಚಿಕೆಗೇಡಿನ ಸಂಗತಿಯಾಗಿದೆ. ಫೆಬ್ರವರಿ 26 ರಂದು ರಾಜಸ್ಥಾನದ ಚುರು ಎಂಬಲ್ಲಿ ಚುನಾವಣಾ ರಾಲಿಯನ್ನುದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, “ದೇಶ ಇಂದು ಸುರಕ್ಷಿತ ಕೈಗಳಲ್ಲಿದೆ” ಎಂದು ಹೇಳಿದ್ದರು. ಇದನ್ನು ವಾಯುಸೇನೆ ನಡೆಸಿದ ದಾಳಿಯನ್ನುದ್ದೇಶಿಸಿ ಹೇಳಿದ್ದರೆಂದು ರಾಜಕೀಯ ಪರಿಣತರು ಅಭಿಪ್ರಾಯಿಸಿದ್ದರು. ಮಾತ್ರವಲ್ಲ ಆ ಚುನಾವಣಾ ರಾಲಿಯ ವೇದಿಕೆಯಲ್ಲಿ ಹುತಾತ್ಮರಾದ ಸೆ ಆರ್ ಪಿ ಎಫ್ ಜವಾನರ ಚಿತ್ರಗಳನ್ನು ಹಾಕಲಾಗಿತ್ತು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಫೆಬ್ರವರಿ 27 ರಂದು ಪೂರ್ವ ಉತ್ತರಪ್ರದೇಶದ ಜಿಲ್ಲೆಯಲ್ಲಿ ನಡೆಸಿದ ಚುನಾವಣಾ ಭಾಷಣದಲ್ಲಿ “ದೇಶದ ಭದ್ರತೆಯ ಭರವಸೆ ಯಾರು ನೀಡುತ್ತಾರೆ?  ಘಟಬಂಧನ ಅಥವಾ ಮೋದಿ?  ಪಾಕಿಸ್ಥಾನಕ್ಕೆ ಯಾರು ಉತ್ತರ ನೀಡಬಲ್ಲರು ?” ಎಂದೆಲ್ಲಾ ಪ್ರಶ್ನಿಸಿದ್ದು,  ಸಿ ಆರ್ ಪಿ ಎಫ್ ಜವಾನರ ಹುತಾತ್ಮತೆ ಹಾಗೂ ತದನಂತರದ ವಾಯುಸೇನೆಯ ದಾಳಿಯನ್ನು ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡಿರುವುದು ಸ್ಪಷ್ಟವಾಗಿತ್ತು.  ಒಟ್ಟಿನಲ್ಲಿ ಗಡಿಯಲ್ಲಿ ಹೆಚ್ಚಿರುವ ಉದ್ವಿಗ್ನತೆಯನ್ನು ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯ ಲಾಭ ನಷ್ಟದ ಲೆಕ್ಕಾಚಾರಕ್ಕೆ ಬಳಸಿಕೊಳ್ಳುತ್ತಿರುವುದು ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

 

ARY ಚಾನೆಲ್ ವರದಿ

To Top
error: Content is protected !!
WhatsApp chat Join our WhatsApp group