ಸಾಮಾಜಿಕ ತಾಣ

ಹುತಾತ್ಮ ಯೋಧನ ಶವಪೆಟ್ಟಿಗೆಯ ಮುಂದೆ ಬಿಜೆಪಿಯ ಕೇಂದ್ರ ಸಚಿವನ ಸೆಲ್ಫೀ !!

ವರದಿಗಾರ (ಫೆ 17) : ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದ ಕೇರಳದ ವಯನಾಡಿನ ವಸಂತ್ ಕುಮಾರ್ ವಿವಿ ಎನ್ನುವ ಯೋಧನ ಅಂತ್ಯ ಸಂಸ್ಕಾರ ಸ್ಥಳಕ್ಕೆ ಬಂದಿದ್ದ ಮೋದಿ ಸಂಪುಟದ ಪ್ರವಾಸೋದ್ಯಮ ಸಚಿವ ಕೆ ಜೆ ಅಲ್ಫೋನ್ಸೋ, ಯೋಧನ ಶವಪೆಟ್ಟಿಗೆಯ ಮುಂದೆ ನಿಂತು ಸೆಲ್ಫೀ ತೆಗೆದು ಅದನ್ನು ತನ್ನ ಫೇಸ್ಬುಕ್ ಪೇಜಿಗೆ ಅಪ್ಲೋಡ್ ಮಾಡಿದ್ದಾರೆ. ಇದರ ವಿರುದ್ಧ ಪ್ರಜ್ಞಾವಂತ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹವಾಲ್ದಾರ್ ವಸಂತ್ ಕುಮಾರ್ ಕೇರಳದ ವಯನಾಡ್ ಜಿಲ್ಲೆಯ ಲಕ್ಕಿಡಿ ಗ್ರಾಮದ ಬುಡಕಟ್ಟು ಕುಟುಂಬವೊಂದಕ್ಕೆ ಸೇರಿದವರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು ಸಾರ್ವಜನಿಕರ ವೀಕ್ಷಣೆಗೆ ಇಡಲಾದ ವೇಳೆ ಅಲ್ಫೋನ್ಸ್ ಸೆಲ್ಫೀ ತೆಗೆದಿದ್ದಾರೆನ್ನಲಾಗಿದೆ.

ಸಾಮಾಜಿಕ ತಾಣಗಳಲ್ಲಿ ಈ ಕುರಿತು ನೆಟ್ಟಿಗರು ಅಲ್ಫೋನ್ಸೋ ಅವರನ್ನು ತೀವ್ರ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್ ಬಳಕೆದಾರನೊಬ್ಬ “ಅಲ್ಫೋನ್ಸೋ ಅವರೇ, ನೀವು ಈ ಸೆಲ್ಫಿಗಾಗಿ ಉತ್ತಮ ಗುಣಮಟ್ಟದ ಕ್ಯಾಮರಾ ಬಳಸಬೇಕಿತ್ತು, ಯಾಕಂದ್ರೆ ಈ ಫೋಟೋದಲ್ಲಿ ನಿಮ್ಮ ಮುಖದಲ್ಲಿನ ನಾಚಿಕೆಗೇಡು ಸರಿಯಾಗಿ ಕಾಣಿಸುತ್ತಿಲ್ಲ” ಎಂದು ಕುಟುಕಿದ್ದಾರೆ.

ಮತ್ತೊಬ್ಬರು ” ಮಾಜಿ ಸರ್ಕಾರಿ ಅಧಿಕಾರಿ, ಹಾಲಿ ಬಿಜೆಪಿ ಮಂತ್ರಿಯೊಬ್ಬರು ಅತ್ಯಂತ ಸಂವೇದನಾರಹಿತರಾದ ಶೈಲಿಯಲ್ಲಿ ಹುತಾತ್ಮ ಯೋಧನೊಬ್ಬನ ಶವಪೆಟ್ಟಿಗೆಯ ಮುಂದೆ ಸೆಲ್ಫೀ ತೆಗೆಯುತ್ತಿದ್ದಾರೆ !
ನೀತಿ ಪಾಠ : ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಯಾವುದಕ್ಕೂ ಮಾನದಂಡವಲ್ಲ”

ಮತ್ತೊಬ್ಬರು ಟ್ವಿಟ್ಟರ್ ಬಳಕೆದಾರರು, “ಆತ್ಮರತಿಯ ಅತಿರೇಕ. ‘ಯಥಾ ರಾಜ ತಥಾ ಮಂತ್ರಿ’ ಎಂಬ ಗಾದೆ ಇಲ್ಲಿ ಸೂಕ್ತ ” ಎಂದು ಕಟುವಾಗಿ ವಿಮರ್ಶಿಸಿದ್ದಾರೆ.

ಒಟ್ಟಿನಲ್ಲಿ ಮಾತೆತ್ತಿದ್ದರೆ ದೇಶಪ್ರೇಮದ ಭಾಷಣ ಬಿಗಿಯುವ ಬಿಜೆಪಿಯವರಿಗೆ, ನೆಟ್ಟಿಗರು ಅವರದೇ ಪಕ್ಷದ ಕೇಂದ್ರ ಮಂತ್ರಿಯ ಕೃತ್ಯವನ್ನು ಮುಂದಿಟ್ಟುಕೊಂಡು ನೈಜ ದೇಶಪ್ರೇಮದ ಪಾಠ ಕಲಿಸಿದ್ದಾರೆ.

To Top
error: Content is protected !!
WhatsApp chat Join our WhatsApp group