ಸಾಮಾಜಿಕ ತಾಣ

ಹುತಾತ್ಮ ಯೋಧರ ನಮನ ಕಾರ್ಯಕ್ರಮದಲ್ಲೂ ಮೋದಿಗೆ ಜೈಕಾರ ಕೂಗಿದ ಬಿಜೆಪಿ ಕಾರ್ಯಕರ್ತರು !!

ವರದಿಗಾರ (ಫೆ. 16): ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜೈಶ್ ಉಗ್ರಗಾಮಿಗಳ ಅಟ್ಟಹಾಸಕ್ಕೆ 40ಕ್ಕೂ ಹೆಚ್ಚಿನ ಸಿ ಆರ್ ಪಿ ಎಫ್ ಜವಾನರು ಪ್ರಾಣ ಕಳೆದುಕೊಂಡಿರುವವರ ಕುರಿತಂತೆ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸುವ ಸಭೆಯಲ್ಲೂ ಬಿಜೆಪಿಯ ವಿಘ್ನ ಸಂತೋಷಿಗಳು ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಕೂಗಿದ ಹೇಯ ಘಟನೆ ವರದಿಯಾಗಿದೆ. ಸೈನಿಕರನ್ನು ಮುಂದಿರಿಸಿಕೊಂಡು ತಮ್ಮ ರಾಜಕೀಯ ಲಾಭ ಲೆಕ್ಕಾಚಾರ ಹಾಕಿದ ಬಿಜೆಪಿಯ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹುತಾತ್ಮ ಸೈನಿಕರ ಸಂತಾಪ ಸಭೆಯಲ್ಲೂ ತಮ್ಮ ರಾಜಕೀಯ ಧೂರ್ತ ಬುದ್ಧಿ ತೋರಿಸಿದ ಬಿಜೆಪಿಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ವೀಡಿಯೋ ವೀಕ್ಷಿಸಿ:

ಖ್ಯಾತ ನಟ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿನ ಲೋಪಗಳನ್ನು ಕಟು ಶಬ್ದಗಳಲ್ಲಿ ಟೀಕಿಸುವ ಪ್ರಕಾಶ್ ರೈಯವರು ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಾ, “ಇಂತಹಾ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ನಮ್ಮ ನಾಯಕರಿಗೆ ಬೆಂಬಲವನ್ನು ಸೂಚಿಸಬೇಕು” ಎನ್ನುತ್ತಾ ಮುಂದುವರೆಯುತ್ತಿದ್ದಾಗ ಅಲ್ಲಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ‘ಇಂತಹಾ ಘಟನೆ ನಡೆದಾಗ ಮಾತ್ರ ಮಾತನಾಡಬಾರದು, ಪ್ರತಿ ದಿನ ಸೈನಿಕರ ಬಗ್ಗೆ ಮಾತನಾಡಬೇಕು’ ಎಂದು ಬೊಬ್ಬಿರಿದು ಪ್ರಕಾಶ್ ರೈಯವರ ಭಾಷಣಕ್ಕೆ ತಡೆಯೊಡ್ಡುತ್ತಾನೆ. ಕೊನೆಯಲ್ಲಿ ಹುತಾತ್ಮ ಸೈನಿಕರ ಸಂತಾಪ ಸಭೆಯಲ್ಲಿ “ಮೋದಿ ಮೋದಿ” ಎಂಬ ಎಂದಿನ ಘೋಷಣೆ ಮೇಳೈಸಿ, ಜೀವ ಕಳೆದುಕೊಂಡು ಹುತಾತ್ಮರಾದ ಸೈನಿಕರು ನೇಪಥ್ಯಕ್ಕೆ ಸರಿಯುತ್ತಾರೆ. ಆಗ ಪ್ರಕಾಶ್ ರೈ “ಭಾರತ ಭಾರತ” ಎಂದು ಘೋಷಣೆ ಮೊಳಗಿಸುತ್ತಾರೆ, ಬಿಜೆಪಿ ಕಾರ್ಯಕರ್ತರಿಗೆ ಅದೂ ಅಪಥ್ಯವಾಗಿ ಮೋದಿ ಘೋಷಣೆಗಳನ್ನೇ ಮುಂದುವರೆಸುತ್ತಾರೆ.

ಪ್ರಕಾಶ್ ರೈಯವರಿಗೆ ಪ್ರತಿದಿನ ಸೈನಿಕರನ್ನು ನೆನಪಿಸುವಂತೆ ತಾಕೀತು ಮಾಡಿದ ಬಿಜೆಪಿ ಕಾರ್ಯಕರ್ತರು, ಉಗ್ರರ ದಾಳಿಗೊಳಗಾಗಿ ಸೈನಿಕರು ಹುತಾತ್ಮರಾದರೂ ಬಿಜೆಪಿಯ ರಾಷ್ಟ್ರೀಯ ನಾಯಕರು ತಮ್ಮ ರಾಜಕೀಯ ಕಾರ್ಯಕ್ರಮಗಳನ್ನು ಮೊಟಕುಗೊಳಿಸದಿರುವ ಬಗ್ಗೆ ತುಟಿ ಬಿಚ್ಚಲಿಲ್ಲವೆನ್ನುವುದು ಅವರ ಇಬ್ಬಂದಿತನಕ್ಕೆ ಸಾಕ್ಷಿಯಾಯಿತು. ಈ ಕುರಿತು ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಉಗ್ರರ ದಾಳಿಯ ನಂತರ ಪ್ರಿಯಾಂಕಾ ಗಾಂಧಿ ತನ್ನ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದರು, ರಾಹುಲ್ ಗಾಂಧಿ ಜಿ20 ರಾಷ್ಟ್ರಗಳ ನಾಯಕರ ಜೊತೆಗಿನ ತನ್ನ ಭೇಟಿಯನ್ನು ರದ್ದುಪಡಿಸಿದರು, ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕರ್ನಾಟಕದಲ್ಲಿ ತನ್ನ ರಾಜಕೀಯ ಭಾಷಣ ಮುಂದುವರೆಸಿದ್ದರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಕೇರಳದಲ್ಲಿ ರಾಜಕೀಯ ರಾಲಿ ಆಯೋಜಿಸಿದ್ದರು, ರೈಲ್ವೇ ಮಂತ್ರಿ ಪಿಯೂಶ್ ಗೋಯೆಲ್ ಎಐಎಡಿಎಂಕೆ ಜೊತೆಗಿನ ಚುನಾವಣಾ ಮೈತ್ರಿಯ ಮಾತುಕತೆಗಾಗಿ ಚೆನ್ನೈಗೆ ಆಗಮಿಸಿದ್ದರು, ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆಯನ್ನು ಒಲಿಸಿ ಮೈತ್ರಿ ಮಾಡುವ ಕುರಿತಂತೆ ಮಾತುಕತೆ ನಡೆಸುತ್ತಿದ್ದರು, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದರು” ಎಂಬ ರೀತಿಯ ಪೋಸ್ಟ್ ಗಳು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

To Top
error: Content is protected !!
WhatsApp chat Join our WhatsApp group