ಸಾಮಾಜಿಕ ತಾಣ

ಗಾಂಧಿ ಪ್ರತಿಕೃತಿಗೆ ಗುಂಡಿಕ್ಕಿ ವಿಕೃತಿ ಮೆರೆದ ಹಿಂದೂ ಮಹಾಸಭಾ ವಿರುದ್ಧದ ಪ್ರತಿಭಟನೆಗೆ ಯೋಗಿ ಪೊಲೀಸರ ಅಡ್ಡಗಾಲು!

ವರದಿಗಾರ (ಫೆ.03): ಉತ್ತರಪ್ರದೇಶದ ಅಲಿಗಢದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ನೇತೃತ್ವದ ಮತಾಂಧರ ಪಡೆ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹುತಾತ್ಮ ದಿನವಾದ ಜನವರಿ 30ರಂದು  ಅವರ ಪ್ರತಿಕೃತಿಗೆ ಗುಂಡಿಕ್ಕುವ ಮೂಲಕ ವಿಕೃತಿ ಮೆರೆದಿದ್ದರು. ಗಾಂಧಿಯನ್ನು ಕೊಂದ ಸ್ವತಂತ್ರ ಭಾರತದ ಪ್ರಪ್ರಥಮ ಹಂತಕನೆಂದು ಗುರುತಿಸಲ್ಪಡುವ ನಾಥೂರಾಂ ಗೋಡ್ಸೆಯನ್ನು ಮಹಾತ್ಮನೆಂದು ಕರೆಯುವ ಹಿಂದೂ ಮಹಾಸಭಾದ ವಿರುದ್ಧ ಉತ್ತರ ಪ್ರದೇಶದ ಮೀರತ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ)ದ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಪೊಲೀಸ್ ಪಡೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ.

ಹಿಂದೂ ಮಹಾಸಭಾವು ಜನವರಿ 30ರಂದು ಮಹಾತ್ಮ ಗಾಂಧೀಜಿಯವರ ಪ್ರತಿಕೃತಿಗೆ ಗುಂಡಿಕ್ಕುವ ಮೂಲಕ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಿಸಿದ್ದಲ್ಲದೆ ಗೋಡ್ಸೆಯನ್ನು ವೈಭವೀಕರಿಸಿರುವ ಬಗ್ಗೆ ತೀಕ್ಷವಾಗಿ ಪ್ರತಿಕ್ರಿಯಿಸಿರುವ  ಎಸ್ ಡಿಪಿಐ ರಾಷ್ಟ್ರದಾದ್ಯಂತ ಗಾಂಧಿ ಹಂತಕ ಗೋಡ್ಸೆಯ ಪ್ರತಿಕೃತಿಯನ್ನು ನೇಣಿಗೇರಿಸುವ ಮೂಲಕ ಮತಾಂಧರ ಕುಕೃತ್ಯವನ್ನು ಪ್ರತಿಭಟಿಸುವಂತೆ ಕರೆ ಕೊಟ್ಟಿತ್ತು. ಅದರಂತೆಯೇ ಉತ್ತರಪ್ರದೇಶದ ಎಸ್ ಡಿಪಿಐ ರಾಜ್ಯಾಧ್ಯಕ್ಷ ಮುಹಮ್ಮದ್ ಕಾಮಿಲ್ ಅವರ ನೇತೃತ್ವದಲ್ಲಿ ಮೀರತ್’ನಲ್ಲಿ ಈ ಕುರಿತು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಓರ್ವ ಪೊಲೀಸ್ ಅಲ್ಲಿದ್ದ ಪ್ರತಿಭಟನೆಕಾರರೊಂದಿಗೆ ಹಂತಕ ಗೋಡ್ಸೆ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆಯುವುದನ್ನು ತಡೆಯಲು ವಿಫಲ ಪ್ರಯತ್ನ ನಡೆಸುತ್ತಿರುವುದು ಕಂಡು ಬರುತ್ತದೆ. ಕೊನೆಯಲ್ಲಿ ಆತನೊಂದಿಗೆ ಪ್ರತಿಭಟನೆಕಾರರು ‘ನೀವು ಗಾಂಧಿಯನ್ನು ಒಪ್ಪಿಕೊಳ್ಳುವವರೋ ಅಥವಾ ಹಂತಕ ಗೋಡ್ಸೆಯನ್ನೋ’ ಎಂದು ಪ್ರಶ್ನಿಸಿದಾಗ ಸುಮ್ಮನಾಗಿ ಅಲ್ಲಿಂದ ದೂರ ಸಾಗುತ್ತಿರುವುದು ಕಂಡು ಬರುತ್ತದೆ. ಕೊನೆಯಲ್ಲಿ ಪ್ರತಿಭಟನೆಕಾರರು ಗೋಡ್ಸೆ ಪ್ರತಿಕೃತಿಯನ್ನು ದಹಿಸಿ ತಮ್ಮ ಪ್ರತಿಭಟನೆ ದಾಖಲಿಸುತ್ತಾರೆ.

ಇದರ ನಂತರ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸಧಿಕಾರಿಯ ವರ್ತನೆಯೂ ಕೂಡಾ ಹಂತಕ ಗೋಡ್ಸೆಯ ವಿರುದ್ಧದ ಪ್ರತಿಭಟನೆಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದಂತಿತ್ತು. ಆದರೆ ಇದಕ್ಕೆ ಸೊಪ್ಪು ಹಾಕದ ಪ್ರತಿಭಟನೆಕಾರರು ಹಿಂದೂ ಮಹಾಸಭಾದ ಕುಕೃತ್ಯದ ವಿರುದ್ಧ ಮನವಿ ಸಲ್ಲಿಸುವ ದೃಶ್ಯ ವೀಡಿಯೋದಲ್ಲಿದೆ. ಘಟನೆಯ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಟ್ಟಾರೆಯಾಗಿ ಉತ್ತರಪ್ರದೇಶದ ಪೊಲೀಸರ ಅಸಹನೆ ಎದ್ದು ಕಾಣುತಿತ್ತು.

ವೀಡಿಯೋ ವೀಕ್ಷಿಸಿ:

To Top
error: Content is protected !!
WhatsApp chat Join our WhatsApp group