ಜಿಲ್ಲಾ ಸುದ್ದಿ

ಹೋರಾಟಗಾರರನ್ನು ಕಡೆಗಣಿಸುವ ಮೂಲಕ ಉಡುಪಿ ಜಿಲ್ಲಾಡಳಿತವು ನವಯುಗ ಕಂಪೆನಿಯ ಜೀತದಾಳುವಾಗಿದೆ: ರಿಯಾಝ್ ಫರಂಗಿಪೇಟೆ

‘ಮಸಿ ಬಳಿದಿರುವುದು ಪರೋಕ್ಷವಾಗಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಮುಖಕ್ಕಾಗಿದೆ’

ವರದಿಗಾರ (ಜ.31): ಹೋರಾಟಗಾರರನ್ನು ಕಡೆಗಣಿಸುವ ಮೂಲಕ ಉಡುಪಿ ಜಿಲ್ಲಾಡಳಿತವು ನವಯುಗ ಕಂಪೆನಿಯ ಜೀತದಾಳುವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಸುಂಕ ವಸೂಲಾತಿ ನೆಪದಲ್ಲಿ ನಡೆಯುತ್ತಿರುವ ಹಗಲು ದರೋಡೆಯ ವಿರುದ್ಧ ಸತತ 23 ದಿನಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯು ಹೋರಾಟವನ್ನು ನಡೆಸುತ್ತಾ ಬಂದಿದೆ. ಈ ಹೋರಾಟಕ್ಕೆ ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಬಹಳಷ್ಟು ಹೋರಾಟಗಾರರು ಬೆಂಬಲವನ್ನು ಘೋಷಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಂಗಳೂರಿನಿಂದ ಉಡುಪಿಗೆ ಹೋಗುವಾಗ ಕೇವಲ 50 ಕಿ.ಮೀ ಅಂತರದಲ್ಲಿ 3 ಟೋಲ್ ಗೇಟ್ ಸಿಗುತ್ತದೆ ಸರ್ವಿಸ್ ರಸ್ತೆಯ ಕಾಮಗಾರಿಯೂ ಪೂರ್ಣ ಗೊಂಡಿರುವುದಿಲ್ಲ ಹಾಗೂ ಸ್ಥಳೀಯ ನಿವಾಸಿಗಳಿಗೆ ಉಚಿತ ಪಾಸ್ ವಿತರಿಸಿರುವುದಿಲ್ಲ ಈ ಮೂಲಕ ನವಯುಗ ಕಂಪೆನಿಯು ಹೆಜಮಾಡಿಯಲ್ಲಿ ನಡೆಸುತ್ತಿರುವ ಟೋಲ್ ಸಂಗ್ರಹವು ಸಂಪೂರ್ಣವಾಗಿ ಕಾನೂನು ವಿರೋಧಿ ಮತ್ತು ಅವೈಜ್ಞಾನಿಕವಾಗಿರುತ್ತದೆ ಎಂದು ಆರೋಪಿಸಿ ಇದರ ವಿರುದ್ಧ ಹೋರಾಟವನ್ನು ಕೈಗೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕವು ಕಳೆದ 23 ದಿನಗಳಲ್ಲಿ ಪ್ರತಿಭಟನೆ, ಘೋಷಣೆ, ಜನಪ್ರತಿನಿಧಿಗಳಿಗೆ ಘೆರಾವ್, ಉಪವಾಸ ಸತ್ಯಾಗ್ರಹ ಮತ್ತು ಇಂದು ಮೈಗೆ ಸಂಪೂರ್ಣವಾಗಿ ಮಸಿ ಬಳಿಯುವ ಮೂಲಕ ಹೋರಾಟವನ್ನು ಮುಂದುವರಿಸುತ್ತಿದೆ. ಈ ಮಧ್ಯೆ ಜಿಲ್ಲಾಡಳಿತ ಮತ್ತು ಹೋರಾಟಗಾರರ ಮಧ್ಯೆ ಹಲವು ಸುತ್ತಿನ ಮಾತುಕತೆ ನಡೆದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಜಿಲ್ಲಾಡಳಿತವು ನವಯುಗ ಕಂಪೆನಿಯ ಪರ ವಕಾಲತ್ತು ವಹಿಸಿ ಮಾತನಾಡುತ್ತಿರುವುದನ್ನು ಕಂಡರೆ ಮತ್ತು ನಿರಂತರ 23 ದಿನಗಳಿಂದ ಹೋರಾಟ ನಡೆಸುತ್ತಿರುವ ಹೋರಾಟಗಾರರನ್ನು ಕಡೆಗಣಿಸುತ್ತಿರುವುದನ್ನು ಕಂಡರೆ ಉಡುಪಿ ಜಿಲ್ಲಾಡಳಿತವು ನವಯುಗ ಕಂಪೆನಿಯ ಜೀತದಾಳುವಾಗಿದೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ರಿಯಾಝ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಹೋರಾಟಗಾರರು ಮಸಿ ಬಳಿದಿರುವುದು ತಮ್ಮ ಸ್ವಂತ ಶರೀರಕ್ಕಾಗಿದ್ದರೂ ಅದು ಪರೋಕ್ಷವಾಗಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಮುಖಕ್ಕೆ ಬಳಿದ ಮಸಿಯಾಗಿರುತ್ತದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇನ್ನಷ್ಟು ಅವಮಾನಕ್ಕೆ ಒಳಗಾಗುವುದನ್ನು ತಪ್ಪಿಸಲು ಹೋರಾಟಗಾರರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಇದೇ ಸಂದರ್ಭ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಜಿಲ್ಲಾಡಳಿತವು ತಪ್ಪಿದಲ್ಲಿ ಜನ ಸಾಮಾನ್ಯರ ಆಕ್ರೋಶವನ್ನು ಎದುರಿಸಬೇಕಾಗಿ ಬರಬಹುದು ಎಂದು ರಿಯಾಝ್ ಫರಂಗಿಪೇಟೆ ಎಚ್ಚರಿಸಿದ್ದಾರೆ.

To Top
error: Content is protected !!
WhatsApp chat Join our WhatsApp group