About Us

ತೆರೆಮರೆಯಲ್ಲಿರುವ ಸತ್ಯವನ್ನು ಹೊತ್ತ ‘ವರದಿಗಾರ‘ನ ಬಗ್ಗೆ:

ನಮ್ಮ ದೇಶದ ಬಹುತೇಕ ಪತ್ರಿಕೆಗಳು, ಟಿ.ವಿ. ಚಾನೆಲ್ ಗಳು ಅಧಿಕಾರದಲ್ಲಿರುವವರ ಆಜ್ಞೆಯಲ್ಲಿ ನರ್ತಿಸುವ ಭರದಲ್ಲಿ ತಮ್ಮ ನೈತಿಕತೆಯನ್ನು ಕಳೆದುಕೊಂಡಿವೆ. ಕೆಲವರು ಸತ್ಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ಕಡಿತಗೊಳಿಸಿದರೆ, ಇನ್ನು ಕೆಲವರು ಸತ್ಯವನ್ನೇ ಅಡಗಿಸುವುದರಲ್ಲಿ ತಲ್ಲೀನರಾಗಿದ್ದಾರೆ.

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಯದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ ವರದಿಗಾರನ ಪ್ರಯತ್ನ .

‘ವರದಿಗಾರ’ನೆಂದರೆ ಈ ಸಮಾಜದ ಕಣ್ಣು. ಆ ಕಣ್ಣು ಸರಿಯಾಗಿ ತನ್ನ ಕರ್ತವ್ಯ ನಿರ್ವಹಿಸದೇ ಇದ್ದರೆ? ಕಣ್ಣು ಚಲಾಯಿಸಬೇಕಾದ ದಿಕ್ಕಿನಲ್ಲಿ ಚಲಾಯಿಸದಿದ್ದರೆ? ನೋಡಿಯೂ ನೋಡದಂತೆ ನಟಿಸಿದರೆ? ನೋಡಿಯೂ ಇನ್ನೇನನ್ನೋ ನೋಡಿದಂಗೆ ನಡೆದುಕೊಂಡರೆ? ಅದೇ ಕಣ್ಣನ್ನು ನಂಬಿಕೊಂಡ ಈ ಸಮಾಜದ ಅವಸ್ಥೆ ಏನಾಗಿರಬೇಡ. ಸದ್ಯ ಭಾರತವು ಚಲಾಯಿಸಬೇಕಾದ ದಿಕ್ಕಿನಲ್ಲಿ ಚಲಾಯಿಸುವ ಭರವಸೆಯ, ಪ್ರಾಮಾಣಿಕತೆಯ, ವಿಶ್ವಾಸವನ್ನು ಹೊಂದಿರುವ ಕಣ್ಣಿನ ಚಾಲಕನ ಕನಸು ಕಾಣುತ್ತಿದೆ.

ಭಾರತ ಕನಸು ಕಾಣುತ್ತಿರುವ ಆ ಕಣ್ಣಿನ ಚಾಲಕನಾಗಿ ‘ವರದಿಗಾರ’ ನಿಮ್ಮ ಮುಂದೆ ಬಂದಿದ್ದಾನೆ. ಈ ಚಾಲಕನು ಬರಿಗೈಯ್ಯಲ್ಲಿ ಬಂದಿಲ್ಲ ಬದಲಾಗಿ ತನ್ನ ಹೆಗಲ ಮೇಲೆ ಹಲವಾರು ಜವಾಬ್ದಾರಿಗಳನ್ನು ಹೊತ್ತಿದ್ದಾನೆ. ಕಣ್ಣು ಸರಿಯಾಗಿ ಚಲಾಯಿಸಬೇಕಾದಲ್ಲಿಗೆ ಚಲಾಯಿಸುವುದೇ ಇವನ ಕರ್ತವ್ಯವೆಂದು ಬಲವಾಗಿ ನಂಬಿಕೊಂಡಿದ್ದಾನೆ. ಕಣ್ಣು, ಕಣ್ಣಿನ ಕೆಲಸವನ್ನು ಪ್ರಾಮಾಣಿಕ ಮತ್ತು ಪ್ರಬುದ್ಧತೆಯಿಂದ ಮುಂದುವರಿಸುವ ಜವಾಬ್ದಾರಿಯೂ ಇವನ ಮೇಲಿದೆ.  ತೆರೆಮರೆಯಲ್ಲಿ ಅವಿತುಕೊಳ್ಳುವಂತೆ ಮಾಡಿದ ಸತ್ಯವನ್ನು ಈ ವರದಿಗಾರನೆಂಬ ಕಣ್ಣು ನಿರ್ಭೀತಿಯಿಂದ ಬಹಿರಂಗಗೊಳಿಸಲಿದೆ.

ಈ ವರದಿಗಾರನು ಸುಳ್ಳನ್ನು ಸತ್ಯವೆಂದು ನಂಬಿಸಲು ಪೈಪೋಟಿ ನಡೆಸುತ್ತಿರುವ ಮಾಧ್ಯಮವನ್ನು ಅನುಕರಣೆ ಮಾಡುವುದಿಲ್ಲ ಮತ್ತು ಇವನದೇ ಕಾಲ ಮೇಲೆ ದೃಢವಾಗಿ ನಿಂತು ಕೊಳ್ಳಲಿದ್ದಾನೆ. ಅನ್ಯಾಯ, ಅಧರ್ಮ ಮತ್ತು ಅಸತ್ಯದ ವಿರುದ್ಧ ಯಾವುದೇ ಹಸ್ತಕ್ಷೇಪವಿಲ್ಲ. ಯಾರದೇ, ಯಾವುದೇ ಒತ್ತಡಕ್ಕೆ ಮಾರಿಕೊಳ್ಳುವುದಿಲ್ಲ. ಪತ್ರಿಕಾ ಧರ್ಮವನ್ನು ಉಳಿಸಿ ಬೆಳೆಸಲು ಮತ್ತು ಸುದ್ದಿಯನ್ನು ಸುದ್ದಿಯಾಗಿಯೇ ನಿಮ್ಮ ಹೃದಯಕ್ಕೆ ನೀಡಲು ಈ ವರದಿಗಾರ ನಿಮ್ಮ ಮುಂದಿದ್ದಾನೆ. ತೆರೆಮರೆಯಲ್ಲಿದ್ದ ಸಮಾಜದ ಸುಂದರ ಪ್ರತಿಭೆಗಳನ್ನು ಈ ದೇಶದ ಮುಂದೆ ತೆರೆದಿಡುವುದು ನಮ್ಮ ಉದ್ದೇಶಗಳಲ್ಲಿ ಒಂದು.

ಪೈಪೋಟಿಯಿಲ್ಲದ ಪಾರದರ್ಶಕ ಸುದ್ದಿಗಳನ್ನೇ ನೀಡುವುದು ನಮ್ಮ ಉದ್ದೇಶ. ಅದಕ್ಕೆ ಪ್ರಾಮಾಣಿಕತೆ ಮತ್ತು ಜವಾಬ್ದಾರಿಕೆಯಿಂದ ನೀಡುವುದು ನಮ್ಮ ಕರ್ತವ್ಯ.  ತಪ್ಪುಗಳು ಸಂಭವಿಸದಂತೆ ಜಾಗೃತೆ ವಹಿಸಿಕೊಳ್ಳುತ್ತೇವೆ. ವರದಿಗಾರನಲ್ಲಿ ತಪ್ಪುಗಳು ಕಂಡಲ್ಲಿ ತಿದ್ದುವ ವಿಭಾಗವನ್ನು ಕೈ ಬಿಟ್ಟು ನಿಮ್ಮನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ತಿದ್ದುವಿರಿ ಎಂಬ ಬಲವಾದ ವಿಶ್ವಾಸವು ಇದೆ. ಪತ್ರಿಕೆಯು ಶೋಷಿತರ,ಧಮನಿತರ, ಧಮನಿಸಲ್ಪಟ್ಟವರ, ತುಳಿತಕ್ಕೊಳಪಟ್ಟವರ, ರೈತರ ಮತ್ತು ಕಾರ್ಮಿಕರ ವೇದಿಕೆಯಾಗಿ ಅವರ ಧ್ವನಿಯಾಗಿ ಎಂದಿಗೂ ನಿಲ್ಲುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ವರದಿಗಾರ ತನ್ನ ಅಕ್ಷರ ಸಮರವನ್ನು ನಡೆಸಲಿದ್ದಾನೆ. ಪ್ರಶ್ನಿಸಬೇಕಾದವರನ್ನು ಯಾವುದೇ ಮುಲಾಜಿಲ್ಲದೆ ಪ್ರಶ್ನಿಸುತ್ತದೆ.

ನಿಮ್ಮ ಸಲಹೆ ಸೂಚನೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ತೇಜೋವಧೆಗಳಿಲ್ಲದ ಬರಹಗಳಿಗೆ ಸದಾ ಸ್ವಾಗತ. ಪತ್ರಿಕೆಯನ್ನು ಪತ್ರಿಕೆಯ ರೂಪದಲ್ಲಿ ಜನತೆಗೆ ನೀಡಬೇಕೆಂಬುದು ನಮ್ಮ ಕನಸು. ಇದಕ್ಕಾಗಿಯೇ ‘ವರದಿಗಾರ’ನನ್ನು ಹೊರ ತಂದಿದ್ದೇವೆ. ಭಾರತ ಸ್ವಾತಂತ್ರ್ಯಗೊಂಡ ದಿನದಂದೇ ಅನ್ಯಾಯವನ್ನು ತೆರೆದಿಡುವ ಪತ್ರಿಕೆಯನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇವೆ. ಎಲ್ಲರೂ ಸ್ವಾತಂತ್ರ್ಯವಾಗಿ ಜೀವನ ನಡೆಸಲು ಅಡೆ ತಡೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಅವರ ಧ್ವನಿಯಾಗಿ ನಾವಿದ್ದೇವೆ ಎಂದು ಗಟ್ಟಿ ಧ್ವನಿಯಲ್ಲಿ ಉಚ್ಚರಿಸುತ್ತಿದ್ದೇವೆ.

ಇಲ್ಲಿ ಸುದ್ದಿಗಳು ವ್ಯಾಪಾರಕ್ಕಿಲ್ಲ.

‘ವರದಿಗಾರ’ ತೆರೆಮರೆಯ ಸತ್ಯಗಳೊಂದಿಗೆ……

ಪ್ರೀತಿಯೊಂದಿಗೆ,

ನಿಮ್ಮದೇ ವರದಿಗಾರ

To Top
error: Content is protected !!
WhatsApp chat Join our WhatsApp group